ಬ್ಲಾವಟ್ಸ್ಕೀ, ಹೆಲೆನ ಪೆಟ್ರೋವ್ನ
	1831-91. ರಷ್ಯದ ಪ್ರಸಿದ್ಧ ಮಾನವತಾವಾದಿ ಮತ್ತು ಅತೀಂದ್ರಿಯಜ್ಞಾನಿ. ಈಕೆ 1831ರಲ್ಲಿ ರಷ್ಯದ ಎಕಟೆರಿನೋ ಸ್ಲಾವ್ ಎಂಬ ಪ್ರಾಂತ್ಯದಲ್ಲಿ ಜನಿಸಿದಳು. ಈಕೆ ಚಿಕ್ಕಂದಿನಿಂದಲೂ ಸೂಕ್ಷ್ಮ ಮನಸ್ಸಿನವಳು ಅಂತರ್ಮುಖಿಯೂ ಆಗಿದ್ದಳು. ರಹಸ್ಯವಿದ್ಯೆ ಹಾಗೂ ಶಿಷ್ಟ ಮಾಂತ್ರಿಕ ವಿಷಯಗಳಲ್ಲಿ ಈಕೆಗೆ ವಿಶೇಷ ಪರಿಶ್ರಮವಿತ್ತೆಂದು ಪ್ರತೀತಿ. ಈಕೆ ಬಹುಭಾಷಾ ವಿಶಾರದೆಯೂ ಸಂಗೀತಜ್ಞೆಯೂ ಆಗಿದ್ದಳು. ರಷ್ಯವನ್ನು ಬಿಟ್ಟು 1873ರಲ್ಲಿ ಅಮೆರಿಕಕ್ಕೆ ಬಂದಳು. ಅನಂತರ ಕೆನಡ ಮತ್ತು ಅಮೆರಿಕಗಳಲ್ಲಿ ವ್ಯಾಪಕವಾಗಿ ಸಂಚರಿಸಿ 1975 ನವೆಂಬರ್ 17ರಂದು ನ್ಯೂಯಾರ್ಕ್ ನಗರದಲ್ಲಿ ದಿ ತಿಯಾಸೊ ಫಿಕಲ್ ಸೊಸ್ಯೆಟಿ ಎಂಬ ಅಧ್ಯಾತ್ಮ ಸಂಸ್ಥೆಯೊಂದನ್ನು ಸ್ಥಾಪಿಸಿದಳು. ಜಗತ್ತನ್ನು ಆಳುವ ಅತೀಂದ್ರಿಯ ಅವ್ಯಕ್ತ ಶಕ್ತಿಗಳ ಬಗ್ಗೆ ಹೆಚ್ಚು ಜ್ಞಾನ ಶೋಧಿಸಿ ಸಂಗ್ರಹಿಸುವುದೇ ಈ ಸಂಸ್ಥೆಯ ಮುಖ್ಯ ಗುರಿಯಾಗಿತ್ತು. ಜಾತಿ ಮತ ಕುಲ ಪಂಗಡ ವರ್ಣಲಿಂಗ ಭೇದಗಳನ್ನು ಪರಿಗಣಿಸಿದೆ ಪ್ರಪಂಚಭ್ರಾತೃತ್ವ ಸ್ಥಾಪಿಸುವುದು, ಎಲ್ಲ ಧರ್ಮಗಳ ಬಗ್ಗೆ ಸಹಾನುಭೂತಿಯಿಂದ ಕೂಡಿದ ತೌಲನಿಕ ಅಧ್ಯಯನ ಪ್ರೋತ್ಸಾಹಿಸುವುದರ ಮೂಲಕ ಶಾಂತಿ ಎಲ್ಲೆಡೆ ಮೈದಾಳುವಂತೆ ಮಾಡುವುದು. ಪ್ರಪಂಚದಲ್ಲಿ ಇನ್ನೂ ನಿಗೂಢವಾಗಿಯೇ ಉಳಿದಿರುವ ದೈವಿಕ ನಿಯಮಗಳನ್ನು ಶ್ರದ್ಧೆಯಿಂದ ಶೋಧಿಸುವುದರ ಮೂಲಕ ಮನುಷ್ಯರ ಬಹುಮುಖ ಏಳಿಗೆಯನ್ನು ಸಾಧಿಸುವುದು-ಇವು ಈ ಸಂಸ್ಥೆಯ ಇತರ ಧ್ಯೇಯಗಳು.

	ಅಮೆರಿಕದ ಗಣ್ಯ ವ್ಯಕ್ತಿಯೆನಿಸಿದ್ದ ಕರ್ನಲ್ ಹೆನ್ರಿ ಸ್ಟೀಲ್ ಅಲ್‍ಕಾಟ್ ಎಂಬಾ ತನ್ನ ಸ್ನೇಹವನ್ನು 1879ರಲ್ಲಿ ಈಕೆ ಸಂಪಾದಿಸಿದಳು. ಆ ಮೂಲಕ ತಾನು ಸ್ಥಾಪಿಸಿದ ಸಂಸ್ಥೆಯ ಧ್ಯೇಯಗಳು ಫಲಪ್ರದವಾಗಿ ಇತರೆಡೆಗಳಿಗೆ ಹಬ್ಬುವಂತೆ ಮಾಡುವಲ್ಲಿ ಯಶಸ್ವಿಯಾದಳು. ಅನಂತರದಲ್ಲಿ ಈಕೆ ಭಾರತಕ್ಕೆ ಬಂದು ಮದರಾಸನ್ನು ತನ್ನ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ಮಾನವ ಕಲ್ಯಾಣಕ್ಕಾಗಿ ನಿರಂತರ ಪರಿಶ್ರಮ ಶ್ರದ್ಧೆಯಿಂದ ದುಡಿದಳು. ಈಕೆಯ ಪಟ್ಟ ಶಿಷ್ಯೆಯಾಗಿದ್ದ ಅನಿಬೆಸೆಂಟ್ ಇವಳ ಅನಂತರ ಈ ಸಂಸ್ಥೆಯ ಏಳಿಗೆಗಾಗಿ ದುಡಿದಳು.

	ಬ್ಲಾವಟ್ಸ್ಕೀ ಆಧ್ಯಾತ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾಳೆ. ಈಸ್ ಅನ್‍ವೇಲ್ಡ್ (1877). ದಿ ಸೀಕ್ರೆಟ್ ಡಾಕ್ಟ್ರಿನ್ (1888) ಕೀಟು ತಿಯಾಸೊಫಿ ಮತ್ತು ವಾಯ್ಸ್ ಆಫ್ ದಿ ಸೈಲೆನ್ಸ್ (1889), ಎ ಗ್ಲಾಸರಿ ಆಫ್ ತಿಯೊಸೊಫಿಕಲ್ ಟಮ್ರ್ಸ್- ಇವು ಈಕೆಯ ಕೃತಿಗಳು. ಎ. ಎಲ್. ಕ್ಲೇಥರ್ ಎಂಬುವನು ಈಕೆಯನ್ನು ಕುರಿತು ಎಚ್. ಪಿ. ಬ್ಲಾವಟ್ಸ್ಕೀ: ಹರ್ ಲೈಫ್ ಅಂಡ್ ವರ್ಕ್ ಫಾರ್ ಹ್ಯೂಮ್ಯಾನಿಟಿ ಎಂಬ ಗ್ರಂಥವನ್ನು ರಚಿಸಿದ್ದಾನೆ.
(ವಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ